Wednesday, October 1, 2025

ನಿನ್ನೆ-ನಾಳೆ

ಪ್ರತಿ ಕ್ಷಣವೂ ಜಗತ್ತು ಬದಲಾಗುತ್ತಿದೆ. ನಿನ್ನೆಯಂತೆ ಇಂದಿಲ್ಲ; ಇಂದಿನಂತೆ ನಾಳೆ ಇರುವುದೂ ಇಲ್ಲ. ನಿನ್ನೆಯ ನೆನಪುಗಳೊಂದಿಗೆ, ನಾಳೆಯ ಕಲ್ಪನೆಗಳೊಂದಿಗೆ ಇಂದನ್ನು ಜೀವಿಸಬೇಕಾಗಿದೆ. ಪ್ರತಿ ಇಂದಿನಲ್ಲೂ ನಾಳೆಯ ಕುರಿತು ನೂರು ಕನಸುಗಳು, ಸಾವಿರ ಕಲ್ಪನೆಗಳು..ಅವೇ ನಾಳೆಯೆಂಬ ಜೀವಕ್ಕೆ ಉಸಿರು..💞

Thursday, February 28, 2019

ನನ್ನೆಲ್ಲಾ ಭಾವನೆಗಳ ಕೇಳೋಕೆ "ಕಿವುಡ" ಅವ; ಅವನ ಭಾವನೆಗಳಿಗೆ ಪ್ರತಿಕ್ರಿಯೊಸೊಕೆ "ಮೂಕಿ" ನಾನು; ಇಷ್ಟ-ಕಷ್ಟಗಳ ನಡುವೆ ಮನಸುಗಳ ಪಿಸುಮಾತು.......

Wednesday, February 27, 2019

ನನ್ನ ಮಾತುಗಳು ಅವನ ಕಿವಿಗೆ ಕೇಳಿಸಲಿಲ್ಲ, ಅವನ ಮೌನ ನನಗೆ ಅರ್ಥವಾಗಲಿಲ್ಲ. ಅವನ ಮೌನ ನನಗೆ ಅರ್ಥವಾದಾಗ ನನ್ನ ಮಾತುಗಳು ನಿಂತಿತ್ತು, ಸಂಬಂಧ ಸತ್ತಿತ್ತು.......

Monday, August 20, 2018

A Journey From ENGAGEMENT to MARRIAGE.....

ಗುಳಿಕೆನ್ನೆಯ ಹುಡುಗ,           
        ಸಾಕಷ್ಟು ಕೆಲಸಗಳ ನಡುವೆಯೂ ನನ್ನೆಲ್ಲ ಭಾವನೆಗಳಿಗೆ  ಅಕ್ಷರ ರೂಪ ಕೊಡಲು ಕುಳಿತಿದ್ದೇನೆ. ಎಲ್ಲಿಂದ ಅಕ್ಷರಗಳ ಮೆರವಣಿಗೆ ಆರಂಭಿಸಬೇಕೆಂಬುದೂ ಗೊಂದಲವೇ.
     ಮದುವೆಗೆ ಬೇಡವೆಂದು ಇಬ್ಬರ ಮನಸ್ಸುಗಳು ಹಠ ಹಿಡಿದಿದ್ದಾಗಲೇ ನಮ್ಮಿಬ್ಬರ ಜಾತಕಗಳು ಕೂಡಿಬಿಟ್ಟಿದ್ದವು. ನಿನ್ನ ನೋಡಿದ ಮೊದಲ ಕ್ಷಣ ಇನ್ನೂ ನೆನಪಿದೆ. ತುಂಟಿಯಂಚಿನ ಸಣ್ಣ ಮುಗುಳುನಗೆ, ಮುಖದ ಗಾಂಭೀರ್ಯತೆ, ಗುಳಿಕೆನ್ನೆಗಳು - ಇಷ್ಟವಾಗಲು ಇಷ್ಟೇ ಸಾಕಾಗಿತ್ತಾದರೂ ಪ್ರೀತಿಸಲು ಇನ್ನೂ ಕಾರಣ ಹೊಳೆದಿಲ್ಲ...❤.ನನಗರಿವಿಲ್ಲದಂತೆಯೇ ಮದುವೆಗೆ  yes ಎಂದು ಅನಿಸಿಬಿಟ್ಟಿದ್ದವು.  
ಹಿರಿಯರೇ ನಿಶ್ಚಯಿಸಿದ ಕಾರಣ ಪ್ರೇಮ ನಿವೇದನೆಯಿಲ್ಲದೇ ಆರಂಭವಾದ ಪ್ರೇಮಕಥೆ ನಮ್ಮದು...ಆದರೂ ನನಗಿಷ್ಟ ನಮ್ಮ ಪ್ರೇಮಕಥೆ ಎಲ್ಲ ಪ್ರೇಮಕಥೆಗಳಿಗಿಂತ....😍...
 ಎರಡು ತಿಂಗಳುಗಳಷ್ಟೇ ಕಳೆದಿವೆ ನಮ್ಮ ನಿಶ್ಚಿತಾರ್ಥವಾಗಿ..ಎರಡು ತಿಂಗಳುಗಳ ಹಿಂದೆ ಅಪರಿಚಿತನಾದವನೊಬ್ಬ ಇಪ್ಪತ್ಮೂರು ವರ್ಷಗಳಿಂದ ಪರಿಚಿತರಾದವರನ್ನೆಲ್ಲಾ ಅಪರಿಚಿತರನ್ನಾಗಿಸುವಷ್ಟು ಪರಿಚಿತನಾಗಿದ್ದೀಯಾ!!! ನನ್ನವರ ಮಧ್ಯೆಯೂ ನಾ ಏಕಾಂಗಿ ಈಗೀಗ 😑...ಕೇವಲ ಎರಡೇ ತಿಂಗಳಲ್ಲಿ ಇಷ್ಟರಮಟ್ಟಿಗೆ  ನಿನ್ನ ಹಚ್ಚಿಕೊಂಡಿದ್ದೇನಾ?😱 
   ಮನಸ್ಸು ಈಗಿನಿಂದಲೇ ಪೂರ್ತಿಯಾಗಿ ನಿಮ್ಮೊಡನೆ ಇದೆ. ತಿಂಗಳುಗಳು ಯುಗಗಳಾಗಿ ಉರುಳುತ್ತಿವೆ. ನಿನ್ನಿಂದಲೇ ಪ್ರತಿ ಬೆಳಗು  , ನಿನ್ನಿಂದಲೇ ಪ್ರತಿ ಇರುಳು..
ನೂರು ಕನಸುಗಳಿವೆ ನಿನ್ನೊಂದಿಗೆ, ನನ್ನ ಕನಸುಗಳಿಗೆ ರೆಕ್ಕೆಯಿದ್ದರೆ ಹಾರಿಬಂದು ನಿನ್ನ ಬಳಿ ಹೇಳುತ್ತಿದ್ದವೇನೋ  ಬಹುಶಃ 😃.....ರಾತ್ರಿ ಕನಸುಗಳೊಂದಿಗೆ ಹಗಲಿನ ವಾಸ್ತವಿಕತೆಯೂ ಅರಿವಾಗದೇ ಇಲ್ಲ. ಹುಟ್ಟಿ ಬೆಳೆದ ಪರಿಸರವನ್ನು ಬಿಟ್ಟು, ನನ್ನವರನ್ನು ಬಿಟ್ಟು ನಿನ್ನೆ- ಮೊನ್ನೆ ಅಪರಿಚಿತರಾದವರೊಂದಿಗೆ ಹೊಂದಿಕೊಳ್ಳುವುದು ನಿಜಕ್ಕೂ ಕಷ್ಟವೇ..ಸದಾ ಗಂಭೀರವಾಗಿರುವ ನಿಮಗೆ ಸದಾ ತುಂಟಾಟ ಮಾಡುವ ನಾನು ಹೊಂದಿಕೊಳ್ಳುವೇನೆ??? ನಿನ್ನ ಮೌನಕ್ಕೂ ಮಾತು ಕಲಿಸುವ ಮಾತಿನ ಮಲ್ಲಿ ನಾನು...ಆದರೂ ಮನದ ಮೂಲೆಯಲ್ಲೊಂದು ಸಣ್ಣಗೆ ಭಯ. ಈ ಎಲ್ಲ ಭಯಕ್ಕೂ ನಿನ್ನ ಒಂದು ಕಿರುನೋಟ, ಗುಳಿಕೆನ್ನೆಯ ನಗು ಧೈರ್ಯ ಹೇಳಿಬಿಡುತ್ತವೆ.. ನನ್ನ ತಪ್ಪನ್ನು ತಿದ್ದಿ, ಸರಿಯಾದುದನ್ನು ಮೆಚ್ಚಿ ಬದುಕಿನ ಪ್ರತೀ ಹೆಜ್ಜೆಯಲ್ಲಿಯೂ ಇರುವಿರೆಂಬ ಭರವಸೆಯಿದೆ.  
  ನಿನ್ನ ಹೆಸರಿನ ಮದರಂಗಿಯನ್ನು ಕೈತುಂಬಿಸಿಕೊಂಡು, ಕೊರಳಲ್ಲಿ ಹೂಮಾಲೆಯೊಂದಿಗೆ ಬದುಕಿನ ಮುಂದಿನ ಹೆಜ್ಜೆಗಳನ್ನು ಸಪ್ತಪದಿಯೊಂದಿಗೆ ಆರಂಭಿಸಲು ದಿನಗಳನ್ನು ಎಣಿಸುತ್ತಿದ್ದೇನೆ..😍...ವರಪೂಜೆಯಲ್ಲಿ ನೀ ನಮ್ಮ ಮನೆಯ ಅಳಿಯ ದೇವರಾಗಲು, ನಿನ್ನ ಮನೆಯ ಗೃಹಲಕ್ಷ್ಮೀಯಾಗಿ ನನ್ನ ವಧುಪ್ರವೇಶಕ್ಕೆ ಮೂರು ತಿಂಗಳಷ್ಟೇ ಬಾಕಿ...😉
    ನನ್ನ ತುಂಟತನ ಮತ್ತು ನಿನ್ನ ಗಾಂಭೀರ್ಯತೆಗಳನ್ನು ಸಮನಾಗಿ ಹಂಚಿಕೊಂಡು ಮುಂದಿನ ಬದುಕಿಗೆ ಅಣಿಯಾಗೋಣ!!!!!!👫
                               ಇಂತಿ
                     ಗುಳಿಕೆನ್ನೆಯವನ 
                   ‌‌      ತರಲೆ ಹುಡುಗಿ  😍